Prajaakeeya/ಪ್ರಜಾಕೀಯ

FAQ About Prajaakeeya/ಪ್ರಜಾಕೀಯ

1. ಪ್ರಜಾಪ್ರಭುತ್ವ ಎಂದರೇನು?

ಪ್ರಜಾಪ್ರಭುತ್ವ ಎಂದರೆ ಯಾವುದೇ ವರ್ಗ, ಗುಂಪು ಅಥವಾ ವ್ಯಕ್ತಿಯ ಅಧೀನದಲ್ಲಿಲ್ಲದೆ ಜನತೆಯ ಅಧೀನದಲ್ಲಿರುವ ಸರ್ಕಾರ (ಡೆಮಾಕ್ರಸಿ). ಪ್ರಜಾಪ್ರಭುತ್ವ ಒಂದು ಜೀವನ ವಿಧಾನವೇ ಆಗಿದೆ. ಆರ್ಥಿಕ ಸಾಮಾಜಿಕ ಸಮಾನತೆ ಹಾಗೂ ರಾಜಕೀಯ ಸ್ವಾತಂತ್ರ್ಯ ಒದಗಿಸಿಕೊಡಲು ಅದು ಹೋರಾಡುತ್ತದೆ. ನಾಗರಿಕರಲ್ಲಿ ಪರಸ್ಪರ ತಿಳಿವಳಿಕೆ, ವಿಚಾರ ವಿನಿಮಯ, ಸಹಕಾರ, ಸಹಾನುಭೂತಿ, ರಚನಾತ್ಮಕ ವಿಮರ್ಶೆ ಜೀವಂತ ಪ್ರಜಾಪ್ರಭುತ್ವದ ಲಕ್ಷಣಗಳಾಗಿರುತ್ತವೆ.

2. ಸಂವಿಧಾನ ಎಂದರೇನು?

ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ. ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ. ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನವು ದೇಶದ ಗುರಿಗಳು - ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ. ಅದು ಪ್ರಜೆಗಳ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಖಚಿತವಾಗಿ ವಿಧಿಸುತ್ತದೆ.

3. ಸರ್ಕಾರ ಎಂದರೇನು?

ಸರ್ಕಾರವು ಸಂಘಟಿತ ಸಮುದಾಯವನ್ನು, ಸಾಮಾನ್ಯವಾಗಿ ರಾಜ್ಯವನ್ನು ಆಳುವ ವ್ಯವಸ್ಥೆ ಅಥವಾ ಜನರ ಗುಂಪು . ಅದರ ವಿಶಾಲವಾದ ಸಹವರ್ತಿ ವ್ಯಾಖ್ಯಾನದ ಸಂದರ್ಭದಲ್ಲಿ, ಸರ್ಕಾರವು ಸಾಮಾನ್ಯವಾಗಿ ಶಾಸಕಾಂಗ , ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಒಳಗೊಂಡಿರುತ್ತದೆ . ಸರ್ಕಾರವು ಸಾಂಸ್ಥಿಕ ನೀತಿಗಳನ್ನು ಜಾರಿಗೊಳಿಸುವ ಸಾಧನವಾಗಿದೆ, ಜೊತೆಗೆ ನೀತಿಯನ್ನು ನಿರ್ಧರಿಸುವ ಕಾರ್ಯವಿಧಾನವಾಗಿದೆ. ಅನೇಕ ದೇಶಗಳಲ್ಲಿ, ಸರ್ಕಾರವು ಒಂದು ರೀತಿಯ ಸಂವಿಧಾನವನ್ನು ಹೊಂದಿದೆ , ಅದರ ಆಡಳಿತ ತತ್ವಗಳು ಮತ್ತು ತತ್ವಶಾಸ್ತ್ರದ ಹೇಳಿಕೆ.

4. ತೆರಿಗೆ ಎಂದರೇನು? ಯಾವ ಯಾವ ತೆರಿಗೆಗಳನ್ನು ನಾವು/ಪ್ರಜೆಗಳು ಕಟ್ಟುತ್ತಾ ಇದ್ದೀವಿ?

ತೆರಿಗೆ(tax) ಎಂಬುದು ಸರ್ಕಾರದ ಆರ್ಥಿಕ ವ್ಯವಸ್ಥೆಯ ಒಂದು ಭಾಗ. ಕಂದಾಯವು ಸ್ಥೂಲವಾಗಿ ತೆರಿಗೆ ಎಂಬ ಅರ್ಥದಲ್ಲಿ ಕನ್ನಡದಲ್ಲಿ ಪ್ರಚಲಿತವಾಗಿರುವ ಶಬ್ದ. ತೆರಿಗೆಯು ಒಂದು ಸರ್ಕಾರ ಅಥವಾ ಅದರ ಕಾರ್ಯಾತ್ಮಕ ಸಮಾನವಾದ ಸಂಸ್ಥೆಯು ತೆರಿಗೆದಾರನ ಮೇಲೆ ಹೇರುವ ಶುಲ್ಕ. ಮಾರಾಟಗಾರ ಮತ್ತು ಕೊಳ್ಳುವವರ ಮಧ್ಯೆ ವಸ್ತುವೊಂದು ಮಾರಲ್ಪಟ್ಟಾಗ ಸ್ಥಳೀಯ ವಾಣಿಜ್ಯ ತೆರಿಗೆ ಇಲಾಖೆಯು ಸದರಿ ವಸ್ತುವಿನ ಮೇಲೆ ವಿಧಿಸುವ ಶುಲ್ಕವನ್ನು ತೆರಿಗೆಯೆಂದು ಹೇಳಬಹುದು. ಗಮನಿಸಬೇಕಾದ ಅಂಶವೆಂದರೆ,ಇಲ್ಲಿ ಮಾರಲ್ಪಡುವ ವಸ್ತು ಕಣ್ಣಿಗೆ ಕಾಣಿಸುವ (visible) ಮತ್ತು ಅದೃಶ್ಯರೂಪ (Invisible but felt)ದ್ದಾದರೂ ಆಗಿರಬಹುದು. ಸ್ಥಳೀಯ ಸರ್ಕಾರ ಈ ತೆರಿಗೆಯನ್ನು ತನ್ನ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಸಂಬಳಕ್ಕೆ ಮತ್ತು ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ವ್ಯಯ ಮಾಡುತ್ತದೆ. ಹಾಗೆಯೇ ಸುಂಕ ಕೂಡ ತೆರಿಗೆಯ ಇನ್ನೊಂದು ರೂಪವೇ ಆಗಿದೆ. ತೆರಿಗೆದಾರರು ತೆರಿಗೆಯನ್ನು ಪೂರ್ಣವಾಗಿ ಭರಿಸದ ಸಂದರ್ಭದಲ್ಲಿ ಅವರಿಗೆ ಶಿಕ್ಷೆ ವಿಧಿಸಬಹುದಾಗಿದೆ.

ಸರ್ಕಾರವು ಅನೇಕ ರೀತಿಯ ತೆರಿಗೆಗಳನ್ನು ನಾನಾ ಹಂತದಲ್ಲಿ ವಿಧಿಸುತ್ತದೆ. ಅವು ಕೆಳಗಿನಂತಿವೆ.

ಮೌಲ್ಯವರ್ಧಿತ ತೆರಿಗೆ - ವ್ಯಾಟ್ (Value Added Tax)

ವೃತ್ತೀಯ ತೆರಿಗೆ - (Professional Tax)

ಮನರಂಜನಾ ತೆರಿಗೆ - (Entertainment Tax)

ಮಾರಾಟ ತೆರಿಗೆ - (Sales Tax)

ಆದಾಯ ತೆರಿಗೆ - (Income Tax)

ಆಬಕಾರಿ ಸುಂಕ - (Excise Duty)

ಸಂಪತ್ತಿನ ತೆರಿಗೆ - (wealth Tax)

ಮೇಲಿನ ತೆರಿಗೆ - (surcharge)

ಸೇವಾ ತೆರಿಗೆ - (Service Tax)

ತಲೆಗಂದಾಯ - (Poll tax)

ಆಸ್ತಿಯ ಮೇಲಿನ ತೆರಿಗೆ - (property tax)

ಇದಲ್ಲದೇ ಇನ್ನೂ ಅನೇಕ ರೀತಿಯ ತೆರಿಗೆಗಳನ್ನು ಗಮನಿಸಬಹುದಾಗಿದೆ.

5. ಸರ್ಕಾರ ನಡೀತಾ ಇರೋದು ಯಾರ ದುಡ್ಡಲ್ಲಿ?

ಸರಕಾರವು ನಡೀತಾ ಇರೋದು ನಮ್ಮೆಲ್ಲರ ದುಡ್ಡಲ್ಲಿ. ನಾವೆಲ್ಲರೂ ಪ್ರತಿದಿನ/ಪ್ರತಿ ತಿಂಗಳು/ಪ್ರತಿ ವರ್ಷ ವಿವಿಧ ತೆರಿಗೆಗಳನ್ನು ಕಟ್ಟಿ, ಅದರಿಂದ ಸಂಗ್ರಹವಾಗಿರುವ ದುಡ್ಡಲ್ಲಿ ಜನರಿಗೆ ಬೇಕಾಗಿರುವ ಎಲ್ಲಾ ರೀತಿಯ ಸರ್ಕಾರದ ಯೋಜನೆಗಳು, ಕಾಯ್ದೆಗಳ ಜಾರಿ, ಹಾಗೂ ಸಾರ್ವಜನಿಕವಾಗಿ ಇರುವ ಸರ್ಕಾರದ ಎಲ್ಲಾ ಇಲಾಖೆಗಳ ಕೆಲಸಗಳು, ಪೊಲೀಸ್ ವ್ಯವಸ್ಥೆ ಇತ್ಯಾದಿ ಕೂಡ ನಮ್ಮ ದುಡ್ಡಲ್ಲಿ ನಡೆಯುತ್ತಿದೆ. ಹಾಗಾಗಿ ನಮ್ಮ ನಮ್ಮ ಗ್ರಾಮ, ಜಿಲ್ಲೆ, ರಾಜ್ಯ ಹಾಗೂ ದೇಶ ಎಲ್ಲಾ ಕೂಡ ನಮ್ಮದೇ ಹಾಗೂ ಇವೆಲ್ಲ ನಡೆಯುತ್ತಿರುವುದು ನಮ್ಮೆಲ್ಲರ ದುಡ್ಡಲ್ಲಿ.

6. ನಮ್ಮ ದೇಶದ ಹಾಗೂ ನಮ್ಮ ರಾಜ್ಯದ ಒಟ್ಟು ಬಜೆಟ್ ನ ಮೊತ್ತ ಎಷ್ಟು? (ಇತ್ತೀಚಿನ ವರ್ಷ 2022ರ ಬಜೆಟ್ ಪ್ರಕಾರ)

ನಮ್ಮ ದೇಶದ (ಭಾರತ) ಬಜೆಟ್ ನ ಒಟ್ಟು ಮೊತ್ತವು 39.45 ಲಕ್ಷ ಕೋಟಿ ಆಗಿದೆ. (2022 ರ ಬಜೆಟ್ ಪ್ರಕಾರ)

ನಮ್ಮ ರಾಜ್ಯದ (ಕರ್ನಾಟಕ) ಬಜೆಟ್ ನ ಒಟ್ಟು ಮೊತ್ತವು 2.65 ಲಕ್ಷ ಕೋಟಿ ಆಗಿದೆ. (2022 ರ ಬಜೆಟ್ ಪ್ರಕಾರ)

7. ಮತದಾನ/ಚುನಾವಣೆ ಎಂದರೇನು? ಮತದಾನದ ಮಹತ್ವ ಏನು?

ಚುನಾವಣೆ ಎನ್ನುವುದು ಒಬ್ಬ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ. ಚುನಾವಣೆಯಲ್ಲಿ ನಮ್ಮ ಒಬ್ಬರ ಆಯ್ಕೆಯನ್ನು ಮತ ಚಲಾಯಿಸುವುದರ ಮೂಲಕ ಮತದಾನ ಮಾಡಬಹುದು. ಮತದಾನ ಎನ್ನುವುದು ನಮ್ಮೆಲ್ಲ ಪ್ರಜೆಗಳ ಹಕ್ಕು. ಮತದಾನ ಮಾಡಿಲ್ಲ ಅಂದರೆ ಅದರಿಂದ ಸರಿಯಾದ ಜನಪ್ರತಿನಿಧಿಗಳು ಆಯ್ಕೆ ಆಗದಿದ್ದರೆ ಮುಂದಿನ ದಿನಗಳಲ್ಲಿ ಅದರ ನೇರ ಪರಿಣಾಮ ಪ್ರಜೆಗಳ ಮೇಲೆ ಬೀರಬಹುದು. ಮತದಾನ ಮಾಡಿಲ್ಲ ಅಂದರೆ ಆಗುವ ದುಷ್ಪರಿಣಾಮಗಳಿಗೆ ಮುಂದಿನ ದಿನದಲ್ಲಿ ನಾವೇ ಜವಾಬ್ದಾರಿಯಾಗಿರುತ್ತೇವೆ. ಹಾಗಾಗಿ ಮತದಾನ ಎನ್ನುವುದರ ಮಹತ್ವವನ್ನು ನಾವೆಲ್ಲ ಅರಿತು, ಆಡಳಿತಕ್ಕೆ ಉಪಯುಕ್ತವಲ್ಲದ ಸುಳ್ಳು ಭರವಸೆಗಳು, ಜಾತಿ/ಧರ್ಮಗಳು, ಹಣ ಇತ್ಯಾದಿಗಳನ್ನು ಬಿಟ್ಟು, ಅದನ್ನು ಉತ್ತಮ ವಿಚಾರಗಳನ್ನು ಮಂಡಿಸುತ್ತಿರುವ ಒಳ್ಳೆಯ ಅಭ್ಯರ್ಥಿಗೆ ಚಲಾಯಿಸುವುದು ಸೂಕ್ತ. ಹಾಗೂ ಆ ಅಭ್ಯರ್ಥಿಯು ಆಯ್ಕೆ ಆದ ಮೇಲೆ ಕೂಡ ಅವರ ಮೂಲಕ ಕೆಲಸ ಮಾಡಿಸಿಕೊಳ್ಳುವ ಜವಾಬ್ದಾರಿ ಕೂಡ ಪ್ರಜೆಗಳೇ ವಹಿಸಬೇಕು.

8. ಚುನಾವಣಾ ಆಯೋಗ ಎಂದರೇನು?

ಭಾರತದ ಚುನಾವಣಾ ಆಯೋಗ (ಇಸಿಐ) ಒಂದು ಸಾಂವಿಧಾನಿಕ ಸಂಸ್ಥೆಯಾಗಿದೆ. ದೇಶದಲ್ಲಿ ಚುನಾವಣೆಗಳನ್ನು ನಡೆಸಲು ಮತ್ತು ನಿಯಂತ್ರಿಸಲು ಭಾರತದ ಸಂವಿಧಾನದಿಂದ ಇದನ್ನು ಸ್ಥಾಪಿಸಲಾಗಿದೆ . ಸಂವಿಧಾನದ 324 ನೇ ವಿಧಿಯು ಸಂಸತ್ತು, ರಾಜ್ಯ ಶಾಸಕಾಂಗಗಳು, ಭಾರತದ ರಾಷ್ಟ್ರಪತಿಗಳ ಕಚೇರಿ ಮತ್ತು ಭಾರತದ ಉಪಾಧ್ಯಕ್ಷರ ಕಚೇರಿಗಳಿಗೆ ಚುನಾವಣೆಗಳ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನಿಯೋಜಿಸುತ್ತದೆ. ಹೀಗಾಗಿ, ಚುನಾವಣಾ ಆಯೋಗವು ಅಖಿಲ ಭಾರತ ಸಂಸ್ಥೆಯಾಗಿದ್ದು ಅದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಸಾಮಾನ್ಯವಾಗಿದೆ.

9. ಜನಪ್ರತಿನಿಧಿ ಎಂದರೇನು? ಜನಪ್ರತಿನಿಧಿಗೂ ನಾಯಕನಿಗೂ ಇರುವ ವ್ಯತ್ಯಾಸ ಏನು?

ನಮ್ಮ ಸಂವಿಧಾನದ ಪ್ರಕಾರ ಜನರ ಪರವಾಗಿ ಬಹುಮತದಿಂದ ಆಯ್ಕೆಯಾಗುವ ವ್ಯಕ್ತಿಯೇ ಜನಪ್ರತಿನಿಧಿ. ಜನಪ್ರತಿನಿಧಿಯು ಬಹು ಜನರ ಅಭಿಪ್ರಾಯ ಸಂಗ್ರಹಿಸಿ ಕಾರ್ಯಾಂಗದಿಂದ ಸಾರ್ವಜನಿಕ ಕೆಲಸಗಳನ್ನು ಮಾಡಿಸುವುದು. ಜನಪ್ರತಿನಿಧಿಯು ಒಬ್ಬ ನಾಯಕ ಅನ್ನೋ ಉಲ್ಲೇಖ ಸಂವಿಧಾನದಲ್ಲಿ ಎಲ್ಲೂ ಇಲ್ಲ. ನಾಯಕ ಅನ್ನೋ ಪರಿಕಲ್ಪನೆ ನಾವೇ ೭೦ ವರ್ಷಗಳಿಂದ ಮಾಡಿಕೊಂಡಿರುವುದು. ಹಾಗಾಗಿ ಇಲ್ಲಿ ನಾಯಕ ಅನ್ನೋ ಕಲ್ಪನೆ ಮುಖ್ಯ ಅಲ್ಲ. ನಾಯಕ ಬೇಕಾಗಿರುವುದು ಒಂದು ತಂಡದಲ್ಲಿ ಅಥವಾ ಇತರ ಸಾರ್ವಜನಿಕ ಚಟುವಟಿಕೆಗಳಲ್ಲಿ

10. ಇವಾಗ ಇರೋ ರಾಜಕೀಯ ವ್ಯವಸ್ಥೆಯಲ್ಲಿ ಇರುವ ಸಮಸ್ಯೆ ಏನು? ಭ್ರಷ್ಟಾಚಾರ ಯಾಕಾಗುತ್ತಿದೆ, ಭ್ರಷ್ಟಾಚಾರದ ಮೂಲ ಏನು?

ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ, ಚುನಾವಣೆಯಲ್ಲಿ ಎಲ್ಲಾ ಪಕ್ಷಗಳೂ ಗೆಲ್ಲಬೇಕು, ಅಧಿಕಾರ ಹಿಡಿಯಬೇಕು ಅನ್ನೋ ಉದ್ದೇಶದಿಂದ ಚುನಾವಣೆಗೆ ಬರುತ್ತಿವೆ. ಪ್ರಜಾಪ್ರಭುತ್ವದ ಮೂಲ ಉದ್ದೇಶದ ಪ್ರಕಾರ ಜನರಿಗೆ ಅಧಿಕಾರ ಕೊಡಬೇಕು ಅಂತ ಯಾವ ಪಕ್ಷ ಅಥವಾ ಅಭ್ಯರ್ಥಿ ಬರುತ್ತಿಲ್ಲ. ಮತದಾರರನ್ನು ಎಲ್ಲಾ ಪಕ್ಷಗಳೂ/ಅಭ್ಯರ್ಥಿಗಳೂ ತನ್ನತ್ತ ಯಾವುದಾದರೂ ತಪ್ಪಾದ ಮಾರ್ಗದಲ್ಲಿ ಸೆಳೆಯುತ್ತಿವೆ. ಆ ಸೆಳೆಯುವ ದಾರಿಗಳು ಹಣ, ಹೆಂಡ, ಧರ್ಮ/ಜಾತಿ ಗಳ ಬಗ್ಗೆ ಮಾತಾಡುವುದು, ಸಾಮಾಜಿಕವಾಗಿ ಪ್ರಚೋದನಾತ್ಮಕವಾಗಿ ಭಾಷಣ ಮಾಡಿ ಜನರನ್ನು ಕೆರಳಿಸುವುದು, ಸುಳ್ಳು ಭರವಸೆಗಳನ್ನು ನೀಡುವುದು, ರಾಜಕೀಯ ಲಾಭಕ್ಕೆ ಸಮಾಜ ಸೇವೆ, ಹೋರಾಟಗಳನ್ನು ಮಾಡುವುದು ಇತ್ಯಾದಿ...ರಾಜಕೀಯ ಪಕ್ಷಗಳ ಉದ್ದೇಶ ಸರಿಯಾಗಿ ಇದ್ದರೂ ಅವರು ಅಧಿಕಾರಕ್ಕೆ ಬರುತ್ತಿರುವ ದಾರಿಗಳು ತಪ್ಪಾಗಿದೆ. ಯಾವಾಗ ಹಣ ಹಾಗೂ ಇತರೆ ತಪ್ಪು ದಾರಿಗಳಿಂದ ಈ ರೀತಿ ಅಧಿಕಾರಕ್ಕೆ ಬರುತ್ತಾರೆ ಆವಾಗ ಜನಪರವಾಗಿ ಕೆಲಸಗಳನ್ನು ಮಾಡಲು ಸಾಧ್ಯವಾಗದೇ ಒದ್ದಾಡುತ್ತಾರೆ. ಇದರಿಂದ ಜನರಿಗೆ ಅವರ ತೆರಿಗೆ ಹಣ ಸರಿಯಾಗಿ ಬರದೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ, ಜನಪ್ರತಿನಿಧಿಯಿಂದ ಆಗುವ ಜನರ ಕೆಲಸಗಳಲ್ಲಿ ವ್ಯವಸ್ಥೆಯಲ್ಲಿರುವ ನ್ಯೂನ್ಯತೆಗಳನ್ನು ಉಪಯೋಗಿಸಿ ಜನಪ್ರತಿನಿಧಿಯು ಭ್ರಷ್ಟತೆಯ ಕಡೆಗೆ ನಡೆಯುತ್ತಾನೆ. ಈಗಿರುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿರುವುದು ನಾವೇ. ಹಾಗಾಗಿ ಇಲ್ಲಿ ಭ್ರಷ್ಟಾಚಾರಕ್ಕೆ ಮೂಲ ಕಾರಣ ನಾವು ನೀವು ಸೇರಿ ಏಲ್ಲಾ ಬಹುಜನರು. ಯಾವತ್ತಿನವರೆಗೂ ಸರಿಯಾದ ವಿಚಾರಗಳನ್ನು ಬಿಟ್ಟು ತಪ್ಪು ದಾರಿಯಲ್ಲಿ ಆಯ್ಕೆ ಆಗುತ್ತಿರುವ ಜನಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡುತ್ತೇವೆ ಅಲ್ಲಿತನಕ ಈ ವ್ಯವಸ್ಥೆ ಬದಲಾಗುವುದಿಲ್ಲ. ನಾವೆಲ್ಲ ಪ್ರಜೆಗಳು ಪ್ರತಿಯೊಬ್ಬರೂ ಜವಾಬ್ದಾರಿಯನ್ನು ಯಾವತ್ತು ಒಗ್ಗಟ್ಟಾಗಿ ತಗೋತಿವಿ ಅವತ್ತು ವ್ಯವಸ್ಥೆಯ ಬದಲಾವಣೆಯ ಪ್ರಯತ್ನ ಸಾಧ್ಯ.

11. ಸಂವಿಧಾನಕ್ಕೂ, ಇಂದಿನ ರಾಜಕೀಯ ಸಂಸ್ಕೃತಿಗೂ ಇರುವ ವ್ಯತ್ಯಾಸ ಏನು?

ಭಾರತದ ಸಂವಿಧಾನವು ಒಂದು ವ್ಯವಸ್ಥೆಯು ಯಾವ ರೀತಿಯಲ್ಲಿ ನಡೆಯಬೇಕು ಅನ್ನೋದನ್ನ ಹಾಗೂ ಅದರ ಮೂಲ ಉದ್ದೇಶಗಳನ್ನು ಪಟ್ಟಿ ಮಾಡಿ, ಕಾಲಕಾಲಕ್ಕೆ ಅದರ ತಿದ್ದುಪಡಿಗಳನ್ನು ಮಾಡಲು ಅವಕಾಶ ಕೊಟ್ಟಿದೆ. ಸಂವಿಧಾನದ ಪ್ರಕಾರ ನಮ್ಮ ವ್ಯವಸ್ಥೆಯು ಇವತ್ತು ನಡೆದಿದ್ದರೆ ಯಾವುದೇ ಭ್ರಷ್ಟಾಚಾರ ಇರುತ್ತಿರಲಿಲ್ಲ. ಆದರೆ ನಮಗೆ ಇಂದು ಕಾಡುತ್ತಿರುವ ಅತಿದೊಡ್ಡ ಮೂಲ ಸಮಸ್ಯೆಯು ಈ ೭೫ ವರ್ಷಗಳ ರಾಜಕೀಯ ಸಂಸ್ಕೃತಿ. ಈ ರಾಜಕೀಯ ಸಂಸ್ಕೃತಿ ಎಂದರೆ, ಒಬ್ಬ ನಾಯಕ ಇರಬೇಕು, ಅವನು ಸಮಾಜ ಸೇವೆ ಅಥವಾ ಸಮಾಜಕ್ಕೆ ಏನಾದರೂ ಮಾಡಬೇಕು, ಬೀದಿ ಹೋರಾಟಗಳನ್ನು ಆಯೋಜಿಸಬೇಕು, ಅವನು ತುಂಬಾ ಪ್ರಸಿದ್ಧ ವ್ಯಕ್ತಿಯಾಗಿರಬೇಕು, ತುಂಬಾ ಚೆನ್ನಾಗಿ ಮಾತಾಡಲು ಗೊತ್ತಿರಬೇಕು, ಅವನು ಅಧಿಕಾರದಲ್ಲಿರುವ ಸರ್ಕಾರ ಏನು ಮಾಡಿದರೂ ವಿರೋಧಿಸಬೇಕು, ಅವನ ದಿನದ ಪೂರ್ಣ ಸಮಯ ರಾಜಕೀಯಕ್ಕೆ ಮೀಸಲಿಡಬೇಕು, ಅವನಿಗೆ ಹಲವು ಕಾರ್ಯಕರ್ತರ ಬೆಂಬಲ ಇರಬೇಕು, ಅವನ ಹತ್ತಿರ ದುಡ್ಡಿರಬೇಕು, ಅವನು ಒಂದು ಕ್ಷೇತ್ರದ ಅತಿದೊಡ್ಡ ಜಾತಿಯ ವ್ಯಕ್ತಿಯಾಗಿರಬೇಕು ಇತ್ಯಾದಿ... ಈ ಹಣಬಲ, ತೋಳ್ಬಲ, ಜಾತಿಬಲ ಗಳ ಸಮೂಹ ಸನ್ನಿಯು ಜನರ ಮನಸ್ಸಿನಲ್ಲಿ ಆಳವಾಗಿ ಕೂತಿದೆ. ಈ ವ್ಯವಸ್ಥೆ ಇರೋದೇ ಹೀಗೆ. ಇಲ್ಲಿ ಯಾರೂ ಬಂದರೂ ಹೀಗೆ ಅನ್ನೋ ಹತಾಶೆಯ ಮನೋಭಾವ ಜನರ ಮನಸ್ಸಿನಲ್ಲಿ ದೀರ್ಘಕಾಲದಿಂದ ಇದೆ. ಹಾಗಾಗಿ ನಾವು ಇಂದು ಪಾಲಿಸಬೇಕಾಗಿರುವುದು ಸಂವಿಧಾನದ ಪ್ರಕಾರ ಯಾವ ರೀತಿ ವ್ಯವಸ್ಥೆಯು ನಡೆಸಬೇಕು ಅನ್ನೋದನ್ನು. ಅದು ಬಿಟ್ಟು ಈ ರಾಜಕೀಯ ಸಂಸ್ಕೃತಿ ಹಿಂದೆ ಬಹು ಜನರು ಕುರಿಮಂದೆಯ ಥರ ಓಡುತ್ತಿದ್ದಾರೆ, ಹಾಗಾಗಿ ನಾವು ಈ ಕುರಿಮಂದೆಯ ಥರ ಅದೇ ಸಂಸ್ಕೃತಿ ಹಿಂದೆ ಓಡೋದು ಬಿಟ್ಟು, ಸಂವಿಧಾನದ ಪ್ರಕಾರ ಅದರ ಉದ್ದೇಶಗಳ ಕಡೆ ನಡೆದರೆ ಬದಲಾವಣೆ ಖಂಡಿತಾ ಸಾಧ್ಯ.

*Endorsement politics - ಅನುಮೋದನೆಯ ರಾಜಕೀಯ*

*ಅನುಮೋದನೆಯ ರಾಜಕೀಯ ಬೇಕೆ ಅಥವಾ ಸ್ವಚ್ಛಂದ ಪ್ರಜಾಪ್ರಭುತ್ವ ಬೇಕೆ ?*

*ಯಾರದೋ ಅನುಮೋದನೆ (Endorsement)ಯಿಂದ ಹಾಗು ಹಣದಿಂದ ಖರೀದಿಸಲಾದ ಪ್ರತಿನಿಧಿ ಬೇಕೆ ಅಥವಾ ಸ್ವಚ್ಛ ಚರಿತ್ರೆಯ, ಸ್ವತಹ ತನ್ನ ಸ್ವಂತ ಬುಧ್ಧಿಯಿಂದ ಚುನಾವಣೆ ನಿಲ್ಲುವ ಪ್ರಾಮಾಣಿಕ ಪ್ರತಿನಿಧಿ ಬೇಕೇ ?*

*ಸಮಾಜ ಸೇವೆ, ಹೋರಾಟ, ಪ್ರತೀಷ್ಟೆ, ಹಿಂಬಾಲಕರು, ಅರ್ಥ ಇಲ್ಲದ ನಿಲುವು ಕೊಡುವ, ಹಾಗು ಸುಳ್ಳು ಭರವಸೆ ಕೊಟ್ಟು, ಅನೈತಿಕ ಮಾರ್ಗದಿಂದ ಸಂಪಾಧಿಸಿದ ಹಣದ ಪಕ್ಷಕ್ಕೆ ದೇಣಿಗೆಕೊಟ್ಟು, ಧರ್ಮ-ಜಾತಿ-ಪಂಗಡ ಎಂದು ಒಂದು ಸಮೂಹದ ಅನುಮೋದನೆ ಪಡೆದು, ಪಕ್ಷದ ಅತಿರಥ- ಮಹಾರಥರಿಂದ ಚುನಾವಣೆ ನಿಲ್ಲುವ ಅನುಮೋದನೆ ಪಡೆದು ಚುನಾವಣೆ ನಿಲ್ಲುವ, ಆರಿಸಿ ಬಂದ ಮೇಲೆ ನಮ್ಮ ತೆರಿಗೆ ಹಣದ ಲೂಟಿ ಹೊಡೆಯುವ, ಭೃಷ್ಟ ರಾಜಕೀಯ ಅಭ್ಯರ್ಥಿ ಬೇಕೆ ?*

*This is a total Endorsement Politics.*

*ಅಥವಾ*

*ಪ್ರಜಾಕೀಯ ಸಿಧ್ಧಾಂತದಂತೆ, ಯಾವುದೂ, ಯಾರದೂ ಅನುಮೋದನೆ ಇಲ್ಲದೆ, ತನ್ನ ಸ್ವಂತ ಬುಧ್ಧಿಯಿಂದ ಚುನಾವಣೆ ನಿಲ್ಲುವ ನಿರ್ಧಾರ ತೆಗೆದು ಕೊಂಡು, ಅವನ ಕ್ಷೇತ್ರದ ಪ್ರಜೆಗಳಿಂದ ಶಿಫಾರಷು ಪಡೆದು, ಯಾವುದೇ ಹಣದ ಅಥವಾ ಸಮಯದ ವ್ಯರ್ಥ ಮಾಡದೆ, ಕೇವಲ ಸಂಬಳಕ್ಕಾಗಿ ಪ್ರಜಾ ಕಾರ್ಮಿಕನಾಗಿ, ಒಂದು "ನಿಯಮಿತ ಕಾರ್ಯ ವೈಖರಿ" ಪ್ರಕಾರ ತನ್ನ ಕೆಲಸವನ್ನು ನಿರ್ವಹಿಸುವ, ಪ್ರಾಮಾಣಿಕವಾಗಿ ಪ್ರಜೆಗಳ ಪ್ರತಿನಿಧಿಯ ಜವಾಬ್ದಾರಿಯನ್ನು ಕೂಲಂಕುಷವಾಗಿ ಮಾಡುವ, ಚುನಾಯಿಸಿ ಬಂದ ಮೇಲೆ, ಪ್ರಜೆಗಳಿಂದಲೇ ಮೌಲ್ಯಮಾಪನಕ್ಕೆ ಒಳಗಾಗುವ,ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಪರಿಗಣಿಸಿ, ಅಧಿಕಾರ ಪ್ರಜೆಗಳ ಕೈಗೆ ಹಸ್ತಾಂತರಿಸಿ, ಪ್ರಜೆಗಳ ಅಭಿಪ್ರಾಯದಂತೆ ಜವಾಬ್ದಾರಿ ನಿರ್ವಹಿಸುವ ಅಭ್ಯರ್ಥಿ ಬೇಕೇ ?*

*No Endorsement at all*

*ಪ್ರಜಾಪ್ರಭುತ್ವ*

-------------------------

*ಪ್ರಜಾಪ್ರಭುತ್ವದ ಕಲ್ಪನೆ ಇಟ್ಟು ಕೊಂಡು, ಸಂವಿಧಾನವನ್ನು ಬರೆಯಲಾಯಿತು. ಅದರಂತೆ, ಭಾರತ, ಪ್ರಜಾಪ್ರಭುತ್ವ ದೇಶವೆಂದು ಘೋಷಣೆ ಮಾಡಲಾಯಿತು.*

*ಪ್ರಜೆಗೆ, ನೇರ ಅಧಿಕಾರ ಕೊಡುವ ಪ್ರಜಾಪ್ರಭುತ್ವದ ಅನಾವರಣ ಮಾಡಲಾಯಿತು. ಅಂದರೆ, ಪ್ರಜೆಯೇ ಪ್ರಭುವೆಂದು ಘೋಷಿಸಲಾಯಿತು. ಪ್ರತಿಯೊಬ್ಬ ಪ್ರಜೆಯು ಆಡಳಿತದಲ್ಲಿ ಭಾಗ ವಹಿಸಲು ಅಸಾಧ್ಯವಾಗಿರುವುದರಿಂದ, ಪ್ರತೀ ಐದು ವರ್ಷಕ್ಕೊಮ್ಮೆ, ಪ್ರಜೆಗಳ ಪ್ರತಿನಿಧಿಗಳನ್ನು ಚುನಾಯಿಸಿ, ಪ್ರಜೆಗಳ ಪರವಾಗಿ, ಆಡಳಿತದಲ್ಲಿ ಸುದಾರಣೆ, ಬದಲಾವಣೆ ಹಾಗು ದೇಶದಲ್ಲಿ ಅಭಿವೃಧ್ಧಿ ಮಾಡಲು, ಕಳುಹಿಸಲಾಗುವುದು.*

*ಸಂವಿಧಾನದ ಮೂರು ಮುಖ್ಯ ಅಂಗಗಳಾಗಿರುವ ನ್ಯಾಯಾಂಗ, ಕಾರ್ಯಾಂಗ ಹಾಗು ಶಾಸಕಾಂಗದಲ್ಲಿ, ಕೇವಲ ಶಾಸಕಾಂಗಕ್ಕೆ ಪ್ರಜೆಗಳು ಚುನಾಯಿಸಿ ಶಾಸಕರನ್ನು( ಪ್ರಜೆಗಳ ಪ್ರತಿನಿಧಿ), ಆಡಳಿತದಲ್ಲಿ ಭಾಗವಹಿಸುವರು. ಇವರು ಪ್ರಜೆಗಳ ಪ್ರತಿನಿಧಿಗಳು ಆಗಿರುವುದರಿಂದ, ಪ್ರಜೆಗಳ ಅವಶ್ಯಕತೆಯಂತೆ ಕೆಲಸ ಮಾಡಬೇಕು.*

*ನೆನಪಿರಲಿ, ಕಾರ್ಯಾಂಗ (Administration), ಎಲ್ಲಾ ರೀತಿಯ ಪರಿಣಿತರು, ಆಯಾಯ ಜವಾಬ್ದಾರಿಗೆ ತಕ್ಕಂತೆ ವಿಧ್ಯಾಭ್ಯಾಸ, ಪರಿಣಿತಿ ಹಾಗು ಕಾರ್ಯ ಕುಶಲತೆ ಇರುವವರು, ಇರುವರು. ಇವರನ್ನೆ, ನಾವು ಸರಕಾರಿ ನೌಕರರೆಂದು ಕರೆಯುವೆವು. ಇವರನ್ನು ಅಧಿಕಾರಿಗಳೆಂದೂ ಕರೆಯುವೆವು. ಹಾಗೆ, ನ್ಯಾಯಾಂಗವು ಇದೇ ರೀತಿ ಇರುವುದು.*

*ಆದ್ದರಿಂದ ಸಂವಿಧಾನದಲ್ಲಿ, ಪ್ರಜೆಗಳ ಪ್ರತಿನಿಧಿಗಳಿಗೆ, ಯಾವುದೇ ವಿಧ್ಯಾಭ್ಯಾಸ, ಪರಿಣಿತಿ ಹಾಗು ಕಾರ್ಯ ಕುಶಲತೆಯನ್ನು ಕೇಳಿಲ್ಲ. ಯಾಕೆಂದರೆ, ಇಲ್ಲಿ, ಪ್ರತಿಯೊಬ್ಬ ಪ್ರಜೆಗೆ ಸಮಾನ ಅವಕಾಶ ಸಿಗಬೇಕೆಂದು ಹಾಗು ಪ್ರಜೆಗಳಿಗಾಗಿ ಕೆಲಸ ಮಾಡುವವನಾಗಿರ ಬೇಕೆಂದು. ಅಷ್ಟೇ ಅಲ್ಲ, ಯಾವುದೇ ಗರೀಷ್ಟ ವಯಸ್ಸಿನ ಪರಿಮಿತಿ ಕೂಡಾ ಮಾಡಿಲ್ಲ. 25 ವರ್ಷದ ಯುವಕ, 40 ವರ್ಷದ ಮಧ್ಯ ಪ್ರಾಯಸ್ತ, 60 ವರ್ಷದ ಹಿರಿಯ ನಾಗರಿಕ ಹಾಗು 80 ವರ್ಷದ ಮುದುಕನೂ, ಚುನಾವಣೆ ನಿಲ್ಲಲು , ಸಂವಿಧಾನದಲ್ಲಿ ಅನುವು ಮಾಡಿ ಕೊಡಲಾಗಿದೆ. ಪ್ರಜೆಗಳಲ್ಲಿ ಯಾವುದೇ ಪಕ್ಷಪಾತ- ತಾರತಮ್ಯ (Discrimination) ಸಂವಿಧಾನದಲ್ಲಿ ಖಂಡಿತಾ ಇಲ್ಲ.*

*ಆದರೆ, ಕಳೆದ 72 ವರ್ಷದ ರಾಜಕೀಯ ಸಂಸ್ಕ್ರತಿಯಲ್ಲಿ, ಇವೆಲ್ಲವನ್ನೂ ಮರೆ ಮಾಚಿ, "ಅನುಮೋದನೆಯ( Endorsement)" ರಾಜಕೀಯ ನಡೆಯುತ್ತಿದೆ. ಇಲ್ಲಿ ನಾಯಕ- ಸೇವಕ ಎಂಬ ಸಂಸ್ಕ್ರತಿಯನ್ನು ಬಿಂಬಿಸಲಾಗಿದೆ. ಅವನು, ಸಮಾಜ ಸೇವೆ ಮಾಡಿರಬೇಕು, ಹೋರಾಟ ಮಾಡಿರಬೇಕು, ಸರಕಾರದ ಎಲ್ಲಾ ಹಾಗು ಹೋಗುಗಳಿಗೆ ತನ್ನ ನಿಲುವು ತುರುಕಿಸಬೇಕು, ಸಮಾಜದಲ್ಲಿ ಪ್ರಸಿಧ್ಧಿ ಪಡೆದಿರಬೇಕು, ನೂರಾರು ಪ್ರಜೆಗಳು ಅವನ ಹಿಂಬಾಲಕರಾಗಿರಬೇಕು, ಸುಳ್ಳು ಭರವಸೆ ಕೊಡುವುದರಲ್ಲಿ ನಿಸ್ಸೀಮನಾಗಿರ ಬೇಕು. ಪಕ್ಷಕ್ಕೆ ಕೋಟಿಗಟ್ಟಲೆ ದೇಣಿಗೆ ತರುವಂತಿರಬೇಕು ಅಥವಾ ಪಕ್ಷಕ್ಕೆ ದೇಣಿಗೆ ಕೊಡುವಷ್ಟು ಶ್ರೀಮಂತನಾಗಿರಬೇಕು. ನಮ್ಮ ತೆರಿಗೆಯನ್ನು ಲೂಟಿ ಹೊಡೆಯುವ ಕರ- ಕುಶಲತೆ ಹೊಂದಿರಬೇಕು. ಅಧಿಕಾರಿಗಳನ್ನು ಹೆದರಿಸಿ- ಬೆದರಿಸಿ, ತನ್ನ ತೆಕ್ಕೆಗೆ ತೆಗೆದು ಕೊಳ್ಳುವಷ್ಟು ಕ್ರೂರಿ ಆಗಿರಬೇಕು. ಪ್ರಜೆಗಳನ್ನು ಅವನ ಗುಲಾಮರಂತೆ ನೋಡಿ ಕೊಳ್ಳುವ ಸರ್ವಾಧಿಕಾರಿ ದೋರಣೆ ಇರಬೇಕು. ಆದರೆ, ಅವನು ಸಂಬಳ,ಭತ್ಯೆ, ವಾಹನ, ಸಾರಿಗೆ, ಆರೋಗ್ಯದ ಖರ್ಚು, ಟೆಲಿಫೋನ್, ಕಚೇರಿ ಖರ್ಚು,ಇತ್ಯಾದಿ ಹಾಗು ಜೀವನ ಪರ್ಯಂತ ಪಿಂಚಣಿ, ಪ್ರಜೆಗಳು ಕಟ್ಟಿದ ತೆರಿಗೆ ಹಣದಿಂದ ಪಡೆಯುವನು.*

*ಒಡೆಯನನ್ನೆ ಗುಲಾಮನನ್ನಾಗಿ ಕಾಣುವ, ಈ ರಾಜಕೀಯ ಸಂಸ್ಕ್ರತಿ, ಯಾವ ಸಂವಿಧಾನದಲ್ಲಿ ಬರೆದಿರುವುದು ಹಾಗು ಯಾವ ಪ್ರಜಾಪ್ರಭುತ್ವ ಇದು ?*

*ಪ್ರಜೆಯು ಸಂಕುಚಿತ ಭಾವನೆ ಹಾಗು ಸಂಕುಚಿತ ಸಮಾಜದಲ್ಲಿ ಬದುಕುವಂತೆ ಮಾಡುವ, ಈ ಪ್ರಜಾಪ್ರಭುತ್ವ ನಮಗೆ ಬೇಕೆ ? ಪ್ರಜೆಗಳೇ, ಯೋಚಿಸಿ ನೋಡಿ.*

ಜೈ ಪ್ರಜಾಕೀಯ

12. ಪ್ರಜಾಕೀಯ ಅಂದರೇನು?

ಪ್ರಜಾಕೀಯ ಅಂದರೆ ಪ್ರಜಾಪ್ರಭುತ್ವ ಸರಕಾರದ ವ್ಯವಸ್ಥೆಯಲ್ಲಿ ಬಹುಜನರ ಅಭಿಪ್ರಾಯವೇ ನಾಯಕನಾಗಿ, ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿ ಇರಬೇಕು ಅನ್ನೋ ಒಂದು ಸಿದ್ಧಾಂತ. ಪ್ರಜಾಕೀಯ ಅಂದ್ರೆ ವ್ಯವಸ್ಥೆ ೧೦೦% ಸರಿ ಆಗುತ್ತೆ ಅನ್ನೋದು ಅಲ್ಲ. ಎಲ್ಲಾ ಜನರ ಸಮಸ್ಯೆಗಳು, ಬೇಡಿಕೆಗಳನ್ನು ಸಂಗ್ರಹಿಸಿ, ತಂತ್ರಜ್ಞಾನ ಬಳಸಿ, ಸಾಂವಿಧಾನಿಕವಾಗಿ ಪಾರದರ್ಶಕ ವ್ಯವಸ್ಥೆ ತಂದು ಒಂದೊಂದಾಗಿ ಪರಿಹಾರಗಳನ್ನು ಪ್ರಜೆಗಳಿಂದಲೇ ಹುಡುಕಿ, ಇನ್ನೂ ನ್ಯೂನತೆಗಳು ಗಳು ಇದ್ರೆ ಅದಕ್ಕೂ ಪ್ರಜೆಗಳಿಂದಲೇ ಉಪಾಯಗಳನ್ನು ಹುಡುಕಿ, ಸಮಸ್ಯೆ ಬಗೆಹರಿಸೋ ಒಂದು ಪರಿಹಾರ ಕೇಂದ್ರಿತ ವ್ಯವಸ್ಥೆಯ ಪ್ರಯತ್ನ. ಸಂಪೂರ್ಣ ಅಧಿಕಾರ ವಿಕೇಂದ್ರೀಕರಣದ ಪ್ರಯತ್ನವೇ ಪ್ರಜಾಕೀಯ ಸಿದ್ಧಾಂತ. ನಿಜವಾದ ಪ್ರಜಾಪ್ರಭುತ್ವ ತತ್ವದ ಅನು ಷ್ಷ ನವೇ ಪ್ರಜಾಕೀಯ.

13. ಪ್ರಜಾಪ್ರಭುತ್ವಕ್ಕೂ , ಪ್ರಜಾಕೀಯಕ್ಕೂ ಇರುವ ವ್ಯತ್ಯಾಸ ಏನು?

ಪ್ರಜಾಪ್ರಭುತ್ವವು ಸಂವಿಧಾನದ ಮೂಲ ಉದ್ದೇಶವಾಗಿದೆ. ಪ್ರಜೆಗಳು ಪ್ರಭುವಾಗಿರಬೇಕು, ಅಧಿಕಾರ ಪ್ರಜೆಗಳ ಕೈಯಲ್ಲಿ ಇರಬೇಕು, ಬಹು ಪ್ರಜೆಗಳ ಅಭಿಪ್ರಾಯದಂತೆ ಯೋಜನೆಗಳು, ಕಾಯ್ದೆಗಳು ನಡೆಯಬೇಕು ಅನ್ನೋದೇ ಪ್ರಜಾಪ್ರಭುತ್ವದ ಸತ್ಯ.

ಪ್ರಜಾಕೀಯ ಎಂದರೆ ಪ್ರಜಾಪ್ರಭುತ್ವವನ್ನು ಅನುಷ್ಟಾನಕ್ಕೆ ತರಲು ಇರುವ ಒಂದು ಮಾರ್ಗ. ಜನಪ್ರತಿನಿಧಿಯ ಆಯ್ಕೆ, ಚುನಾವಣೆ, ತಿದ್ದುಪಡಿ, ತಿರಸ್ಕಾರ, ಪುರಸ್ಕಾರ ಪ್ರಜೆಗಳೇ ಸ್ವಂತ ಜವಾಬ್ದಾರಿ ತಗೊಂಡು ಪ್ರಜೆಗಳೇ ಎಲ್ಲಾ ನಿರ್ಧರಿಸಿ ಪ್ರಜೆಗಳೇ ಹೈ ಕಮಾಂಡ್ ಆಗಿ ಅಧಿಕಾರ ಯಾವುದೋ ನಾಯಕ ಅಥವಾ ಪಕ್ಷದ ಕೈಯಲ್ಲಿ ಕೊಟ್ಟು ತಾನು ೫ ವರ್ಷ ನುಣುಚಿ ಕೊಳ್ಳುವ ಬದಲು, ನಾಯಕ/ಪಕ್ಷವನ್ನು ದೂಷಿಸುವ ಬದಲು, ಪ್ರಜೆಗಳೇ ಎಲ್ಲಾ ಜವಾಬ್ದಾರಿ, ಅಧಿಕಾರ ಇಟ್ಟುಕೊಳ್ಳುವುದು ಪ್ರಜಾಕೀಯ.

14. ಪ್ರಜಾಕೀಯ ಯಾಕೆ ಬೇಕು?

ನಾವೆಲ್ಲ ಪ್ರಜೆಗಳು ತೆರಿಗೆಯನ್ನು ಒಂದಲ್ಲಾ ಒಂದು ರೀತಿ ಕಟ್ಟುತ್ತಿದ್ದೀವಿ. ಈ ತೆರಿಗೆ ಹಣ ನಮಗೆಲ್ಲರಿಗೂ ಪಾರದರ್ಶಕವಾಗಿ ಸಿಗುತ್ತಿದೆಯೇ? ನಮ್ಮ ವ್ಯವಸ್ಥೆಯ/ಸರ್ಕಾರದ ಬಹುತೇಕ ನಿರ್ಧಾರಗಳು/ಯೋಜನೆಗಳನ್ನು ಜನರನ್ನು ಕೇಳಿ ಆಗುತ್ತಿದೆಯೇ? ಇವೆಲ್ಲಾ ಆಗುತ್ತಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ಸತ್ಯ. ಇವೆಲ್ಲ ಆಗಬೇಕು ಅಂದರೆ ಪ್ರಜಾಕೀಯ ಸಿದ್ಧಾಂತದ ಪ್ರಕಾರ ಕೆಲಸ ಮಾಡೋ ಜನಪ್ರತಿನಿಧಿಯು ಆಯ್ಕೆ ಆಗಬೇಕು ಹಾಗೂ ಆ ಜನಪ್ರತಿನಿಧಿಯ ಮೂಲಕ ಪ್ರಜೆಗಳು ಅವರೇ ಜವಾಬ್ದಾರಿ ತಗೊಂಡು ಕೆಲಸಗಳನ್ನು ಮಾಡಿಸಬೇಕು. ಹೀಗೆ ಪ್ರಜೆಗಳು ಜವಾಬ್ದಾರಿ ತಗೊಂಡರೆ ಮಾತ್ರ ನಮ್ಮ ತೆರಿಗೆ ಹಣ ನಮಗೆ ಪಾರದರ್ಶಕವಾಗಿ, ಪ್ರಜೆಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆದಷ್ಟು ಪಾಲ್ಗೊಳ್ಳಿಸಿದರೆ ಮಾತ್ರ ಬದಲಾವಣೆ ಸಾಧ್ಯ. ಇಲ್ಲಾ ಅಂದರೆ ನಮ್ಮ ಈ ಕೆಟ್ಟ ವ್ಯವಸ್ಥೆಯಿಂದ ಮುಂದೆ ನಮ್ಮ ಮುಂದಿನ ಪೀಳಿಗೆಯು ಅನುಭವಿಸುವ ಸಮಸ್ಯೆಗಳನ್ನು ಕಲ್ಪಿಸಿಕೊಂಡರೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇವತ್ತೇ, ಈಗಲೇ ನಾವೆಲ್ಲಾ ಪ್ರಜೆಗಳು ಎಚ್ಚೆತ್ತು ಮುಂದಿನ ಉತ್ತಮ ಸರ್ಕಾರ, ಸಮಾಜವನ್ನು, ಭವಿಷ್ಯವನ್ನು ರೂಪಿಸಲು ಪ್ರಜಾಕೀಯ ಬಹು ಅತ್ಯಗತ್ಯ.

15. ಪ್ರಜಾಕೀಯ ಸಿದ್ಧಾಂತದ ಪ್ರಕಾರ/ಪ್ರಜಾಕೀಯ ಸಿದ್ಧಾಂತವನ್ನು ಅಳವಡಿಸಿಕೊಂಡಿರುವ ಯಾವುದಾದರೂ ಪಕ್ಷ ಕರ್ನಾಟಕದಲ್ಲಿ ಇದೆಯೇ?

ಹೌದು ಇದೆ. ಕರ್ನಾಟಕ ರಾಜ್ಯದಲ್ಲಿ ಪ್ರಜಾಕೀಯ ಸಿದ್ಧಾಂತವನ್ನು ಅಳವಡಿಸಿಕೊಂಡು ಇರುವ ಏಕೈಕ ಪಕ್ಷ ಎಂದರೆ ಅದು ಉತ್ತಮ ಪ್ರಜಾಕೀಯ ಪಕ್ಷ. (ಯು ಪಿ ಪಿ)

16. ಉತ್ತಮ ಪ್ರಜಾಕೀಯ ಪಕ್ಷ ಎಂದರೇನು?

ಉತ್ತಮ ಪ್ರಜಾಕೀಯ ಪಕ್ಷವು ಕರ್ನಾಟಕ ರಾಜ್ಯದಲ್ಲಿ ಒಂದು ನೊಂದಾಯಿತ ಪಕ್ಷವಾಗಿದೆ. ಈ ಪಕ್ಷವು ಪ್ರಜಾಕೀಯ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ. ಇದು ಮತದಾರರ ಪಕ್ಷವಾಗಿದೆ. ಇಲ್ಲಿ ಜನರೇ/ಜನಾಭಿಪ್ರಾಯವೇ ಹೈಕಮಾಂಡ್. ಈ ಪಕ್ಷದ ಆಕಾಂಕ್ಷಿ/ಅಭ್ಯರ್ಥಿ ಆಯ್ಕೆಗಳು, ನಿರ್ಣಯಗಳು, ಸಂಪೂರ್ಣವಾಗಿ ಜನರಿಂದಲೇ ನಡೆಯುತ್ತದೆ. ಈ ಪಕ್ಷವು, ಪ್ರಜಾಪ್ರಭುತ್ವದ ಮೂಲ ಆಶಯದ ಪ್ರಕಾರ, ಸಂಪೂರ್ಣ ಅಧಿಕಾರ ವಿಕೇಂದ್ರೀಕರಣದ ಕಲ್ಪನೆಯನ್ನು ಹೊಂದಿದೆ. ಇಲ್ಲಿ ಯಾವುದೇ ನಾಯಕತ್ವದ ಸಂಸ್ಕೃತಿ ಇರುವುದಿಲ್ಲ. ಈ ಪಕ್ಷದಲ್ಲಿ ಇರುವುದು ಕಾಯಕತ್ವದ ಸಂಸ್ಕೃತಿ.

22. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ಪಾರ್ಟಿ ಫಂಡ್ ಯಾಕಿಲ್ಲ?

ಒಂದು ಪಕ್ಷವನ್ನು ಸಂಘಟಿಸಲು ಅಥವಾ ನಡೆಸಲು ಇವತ್ತಿನ ಮಟ್ಟಿಗೆ ತುಂಬಾ ದುಡ್ಡು ಬೇಕು ಅನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಕಾರ್ಯಕರ್ತರ ಓಡಾಟ, ಊಟ ತಿಂಡಿಯ ಖರ್ಚು, ಪಕ್ಷದ ಕಚೇರಿಗಳ ಖರ್ಚು, ಮೆರವಣಿಗೆ, ಬ್ಯಾನರ್, ರ್ಯಾಲಿ ಮಾಡುವುದು ಇತ್ಯಾದಿ. ಪಕ್ಷದ ಸಿದ್ಧಾಂತಗಳ ಪ್ರಚಾರ, ಪಕ್ಷ ಆಡಳಿತ ದಲ್ಲಿ ಇದ್ದರೆ ಅದು ಮಾಡಿರುವ ಕೆಲಸಗಳ ಪ್ರಚಾರ ಇತ್ಯಾದಿಗಳಿಗೂ ಕೂಡ ಖರ್ಚು ಆಗುತ್ತದೆ. ಯಾವಾಗ ಒಂದು ಪಕ್ಷದ ಫಂಡ್ ಗೆ ಯಾರಾದರೂ ದುಡ್ಡು ಕೊಡುತ್ತಾರೆ, ಅಲ್ಲಿಂದಲೇ ಭ್ರಷ್ಟಾಚಾರ ಶುರುವಾಗುತ್ತದೆ. ಯಾಕೆಂದರೆ ಯಾರೂ ಕೂಡ ಇಂತಿಷ್ಟು ದುಡ್ಡನ್ನು ಒಂದು ಪಕ್ಷಕ್ಕೆ ಕೊಡುತ್ತಾರೆ ಅಂದಮೇಲೆ ಅದರಿಂದ ಲಾಭವನ್ನು ಅಪೇಕ್ಷಿಸುತ್ತಾರೆ. ಈ ರೀತಿಯ ತೊಂದರೆಗಳು ಭವಿಷ್ಯದಲ್ಲಿ ಪಾರ್ಟಿ ಫಂಡ್ ನಿಂದ ಆಗುತ್ತದೆ. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ಜನರಿಗೆ ವಿಚಾರಗಳ ತಲುಪುವಿಕೆ ಮುಖ್ಯ ಹಾಗೂ ಜನರಿಗೆ ಜವಾಬ್ದಾರಿ ಬರೋದು ಮುಖ್ಯ ಎನ್ನುವ ಉದ್ದೇಶಕ್ಕೆ, ಹಾಗೂ ಇವತ್ತಿನ ತಂತ್ರಜ್ಞಾನ ಆಧಾರಿತ ಯುಗದಲ್ಲಿ ವಿಚಾರಗಳು ತುಂಬಾ ವೇಗವಾಗಿ ಇತರ ಮಾರ್ಗಗಳಲ್ಲಿ ತಲುಪಲು ಸಾಧ್ಯ. ಹಾಗಾಗಿ ದುಡ್ಡಿಂದ ಆಗುವ ತೊಂದರೆಗಳು ಬೇಡ, ಮುಂದಿನ ದಿನಗಳಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾಗಬಹುದಾದ ಪಾರ್ಟಿ ಫಂಡ್ ಬೇಡ ಎಂದೇ, ಮೊದಲ ಹೆಜ್ಜೆ ಇಡುವಾಗ ಸರಿಯಾಗಿ ಸರಿಯಾದ ದಾರಿಯಲ್ಲಿ ಇಡೋಣ ಎಂದೇ ಉತ್ತಮ ಪ್ರಜಾಕೀಯ ಪಕ್ಷದಲ್ಲಿ ಪಾರ್ಟಿ ಫಂಡ್ ಎಂಬುದಿಲ್ಲ. ಅದು ಭವಿಷ್ಯದಲ್ಲಿ ಬೇಕಾಗೂ ಇಲ್ಲ.

31. ಉತ್ತಮ ಪ್ರಜಾಕೀಯ ಪಕ್ಷ ದಲ್ಲಿ ನಾಯಕರು ಇದ್ದಾರೆಯೇ?

ಉತ್ತಮ ಪ್ರಜಾಕೀಯ ಪಕ್ಷದಲ್ಲಿ ನಾಯಕ ಸಂಸ್ಕೃತಿ ಇರುವುದಿಲ್ಲಾ. ಇಲ್ಲಿ ಬೇಕಾಗಿರುವುದು ಕಾಯಕತ್ವದ ಸಂಸ್ಕೃತಿ. ಯಾಕೆಂದರೆ ನಮ್ಮ ಸಂವಿಧಾನದಲ್ಲಿ ಒಬ್ಬ ಜನಪ್ರತಿನಿಧಿ ನಾಯಕನಾಗಿರಲೇಬೇಕು ಅಥವಾ ನಾಯಕ ಅನ್ನೋ ಶಬ್ದದ ಉಲ್ಲೇಖ ಎಲ್ಲೂ ಇಲ್ಲಾ. ನಮಗೆ ಒಬ್ಬ ಜನಪ್ರತಿನಿಧಿ ಪ್ರಜಾಕಾರ್ಮಿಕನ ಹಾಗೆ ಸಂಬಳಕ್ಕೆ ಕೆಲಸ ಮಾಡೋ ಕಾಯಕತ್ವದ ಸಂಸ್ಕೃತಿ ಬೇಕಾಗಿರುವುದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಆಗಬೇಕು. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ಜನರೇ/ಜನಾಭಿಪ್ರಾಯವೇ ನಾಯಕ/ಹೈಕಮಾಂಡ್. ವಿಚಾರಗಳೇ ನಾಯಕ. ಸಂವಿಧಾನವೇ ನಾಯಕ.

39. ಗ್ರಾಮ ಪಂಚಾಯಿತಿ ಸದಸ್ಯರಿಗೂ, ಉತ್ತಮ ಪ್ರಜಾಕೀಯ ಪಕ್ಷಕ್ಕೂ ಏನಾದರೂ ಸಂಬಂಧ ಇದೆಯೇ?

ಸಂವಿಧಾನದ ಪ್ರಕಾರ ಗ್ರಾಮ ಪಂಚಾಯಿತಿಗೂ , ಒಂದು ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ಯಾವುದೇ ಪಕ್ಷದ ಹಂಗಿಲ್ಲದೆ, ಅಥವಾ ಪಕ್ಷಗಳ ಬೆಂಬಲ/ಪ್ರಭಾವ ಇಟ್ಟುಕೊಳ್ಳುವುದು ಅಸಾಂವಿಧಾನಿಕ. ಆದರೆ, ಒಬ್ಬ ಗ್ರಾಮ ಪಂಚಾಯಿತಿ ಸದಸ್ಯ ಪ್ರಜಾಕೀಯ ಸಿದ್ಧಾಂತದ ಪ್ರಕಾರ ಕೆಲಸ ಮಾಡಬಹುದು. ಯಾಕೆಂದರೆ, ಪ್ರಜಾಕೀಯ ಅನ್ನುವುದು ಒಂದು ಸಿದ್ಧಾಂತ, ಅದು ಪಕ್ಷ ಅಲ್ಲಾ. ಪ್ರಜಾಕೀಯ ಸಿದ್ಧಾಂತವನ್ನು ಅಳವಡಿಸಿಕೊಳ್ಳುವುದು ಆಯಾ ಗ್ರಾಮದ ಜನರಿಗೆ/ಗ್ರಾಮ ಪಂಚಾಯಿತಿ ಸದಸ್ಯರಿಗೆ ಬಿಟ್ಟಿರುವ ಸ್ವಾತಂತ್ರ್ಯ. ಪ್ರಜಾಕೀಯ ಸಿದ್ಧಾಂತವನ್ನು ಉತ್ತಮ ಪ್ರಜಾಕೀಯ ಪಕ್ಷವೇ ಮಾಡಬೇಕಂತಿಲ್ಲಾ, ಇದನ್ನು ಯಾವುದೇ ಪಕ್ಷ, ಸ್ವತಂತ್ರ ಅಭ್ಯರ್ಥಿ ಅಥವಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಳವಡಿಸಿಕೊಳ್ಳಬಹುದು.

43. ಉತ್ತಮ ಪ್ರಜಾಕೀಯ ಪಕ್ಷದಲ್ಲಿ ನನ್ನ ಕ್ಷೇತ್ರದ ಆಕಾಂಕ್ಷಿ ಹಾಗೂ ಅಭ್ಯರ್ಥಿಯ ಮಾಹಿತಿಯನ್ನು ಹೇಗೆ ನೋಡಬಹುದು?

ಮೊದಲು ಆಂಡ್ರಾಯ್ಡ್ ಪ್ಲೇಸ್ಟೋರ್ ಹೋಗಿ ಪ್ರಜಾಕೀಯ ಅಂತ ಹುಡುಕಿ. ಪ್ರಜಾಕೀಯ App ಇನ್ಸ್ಟಾಲ್ ಮಾಡಿಕೊಳ್ಳಿ. App ನಲ್ಲಿ ಮೇಲೆ ಬಲಗಡೆ ಮೆನು ಆಪ್ಷನ್ ಪ್ರೆಸ್ ಮಾಡಿ. ಆಕಾಂಕ್ಷಿಗಳ ಪಟ್ಟಿ ಒತ್ತಿ. ಆಯಾ ಚುನಾವಣೆಯ ಪ್ರಕಾರ ಎಂಪಿ/ಎಂಎಲ್ಎ ಆಪ್ಷನ್ ಆಯ್ಕೆ ಮಾಡಿ, ಕೆಳಗಿರುವ ಆಪ್ಷನ್ ನಲ್ಲಿ ನಿಮ್ಮ ಕ್ಷೇತ್ರ ಆಯ್ಕೆ ಮಾಡಿ. ಇವಾಗ ನಿಮ್ಮ ಕ್ಷೇತ್ರದಲ್ಲಿ ಯಾರಾದರೂ ಆಕಾಂಕ್ಷಿಗಳು ಇದ್ದಲ್ಲಿ, ಅವರ ಭಾವಚಿತ್ರ, ಫೇಸ್ಬುಕ್ ಖಾತೆಯ ಲಿಂಕ್ ಹಾಗೂ ಅವರನ್ನು ಸಂಪರ್ಕ ಮಾಡಲು ಅವರ ಮೊಬೈಲ್ ಸಂಖ್ಯೆ ಇರುತ್ತದೆ. ನೀವು ಈ ಮಾಹಿತಿಗಳಿಂದ ನಿಮ್ಮ ಆಕಾಂಕ್ಷಿಯನ್ನು ಸಂಪರ್ಕಿಸಬಹುದು.

ಇದೇ ರೀತಿ ಚುನಾವಣಾ ಸಮಯದಲ್ಲಿ ಯಾರು ಜನರಿಂದ ಜಾಸ್ತಿ ಸಹಿ ಸಂಗ್ರಹಣೆ ಮಾಡಿರುತ್ತಾರೆ ಅವರನ್ನು ಅಭ್ಯರ್ಥಿ ಅಂತ ಆಯ್ಕೆ ಮಾಡಲಾಗುತ್ತದೆ. App ನಲ್ಲಿ ಮೇಲೆ ಬಲಗಡೆ ಮೆನು ಆಪ್ಷನ್ ಪ್ರೆಸ್ ಮಾಡಿ. ಅಭ್ಯರ್ಥಿಗಳು ಅಂತ ಒತ್ತಿ. ಈಗ App ನಲ್ಲಿ ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಈ ಪೇಜ್ ನಲ್ಲಿ ತೋರಿಸುತ್ತದೆ.

44. ಉತ್ತಮ ಪ್ರಜಾಕೀಯ ಪಕ್ಷದಿಂದ ನಿಮ್ಮ ಕ್ಷೇತ್ರದಲ್ಲಿ ಯಾರೂ ಆಕಾಂಕ್ಷಿ ಇಲ್ಲದಿದ್ದರೆ ಏನು ಮಾಡಬಹುದು?

ಉತ್ತಮ ಪ್ರಜಾಕೀಯ ಪಕ್ಷದಿಂದ ನಿಮ್ಮ ಕ್ಷೇತ್ರದಲ್ಲಿ ಯಾರೂ ಆಕಾಂಕ್ಷಿಗಳು ಇಲ್ಲದಿದ್ದಲ್ಲಿ, ನೀವೇ ಆಕಾಂಕ್ಷಿಯಾಗಿ ಪ್ರಜಾಕೀಯ App ನಲ್ಲಿ ನೋಂದಾಯಿಸಿಕೊಳ್ಳಬಹುದು. ನಿಮಗೆ ಆಕಾಂಕ್ಷಿಯಾಗಲು ಆಸಕ್ತಿ ಇಲ್ಲದಿದ್ದರೆ, ನಿಮ್ಮ ಕ್ಷೇತ್ರದಲ್ಲಿ ಯಾರಾದರೂ ಪ್ರಜಾಕೀಯ ಸಿದ್ಧಾಂತಗಳ ಪ್ರಕಾರ ಕೆಲಸ ಮಾಡಲು ಆಸಕ್ತಿ ಇದ್ದಲ್ಲಿ ನೀವು ಅವರಿಗೆ ಪ್ರಜಾಕೀಯ App ಬಗ್ಗೆ ಮಾಹಿತಿ ತಿಳಿಸಬಹುದು. ನಿಮ್ಮ ಕ್ಷೇತ್ರದ ಜವಾಬ್ದಾರಿ ನಿಮ್ಮದು. ಹಾಗಾಗಿ ನಿಮ್ಮ ಕ್ಷೇತ್ರಕ್ಕೆ ಆಕಾಂಕ್ಷಿ ಹುಡುಕುವುದು ನಿಮ್ಮ ಜವಾಬ್ದಾರಿ. ಪ್ರಜಾಕೀಯದಲ್ಲಿ ಜವಾಬ್ದಾರಿಯು ಮುಖ್ಯ ಆದ್ದರಿಂದ ಮೊದಲ ಹೆಜ್ಜೆಯನ್ನು ನೀವೇ ಇಡಬೇಕು. ಹಾಗೂ ಆಕಾಂಕ್ಷಿಯ ಹುಡುಕಾಟ ನಿಮ್ಮಿಂದಲೇ ಶುರುವಾಗಲಿ.

45. ಉತ್ತಮ ಪ್ರಜಾಕೀಯ ಪಕ್ಷ ಅಧಿಕಾರಕ್ಕೆ ಬಂದರೆ, ಜನರ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಬಹುದೇ?

ಪ್ರಜಾಕೀಯ ಅಂದರೆ ಕೆಲವು ಸಮಸ್ಯೆಗಳಿಗೆ (ಯಾವುದಕ್ಕೆ ಜನರನ್ನು ಕೇಳಬಹುದು/ಪಾಲ್ಗೊಳ್ಳಿಸಬಹುದು ಆ ಸಮಸ್ಯೆಗಳು) ಜನರಿಂದ ಹಾಗೂ ತಜ್ಞರಿಂದ ಪರಿಹಾರಗಳನ್ನು ಮಾತಾಡೋ/ಚರ್ಚಿಸೋ ಹಾಗೂ ಇರುವ ಪರಿಹಾರದ ಆಯ್ಕೆಗಳಲ್ಲಿ ಇರುವ ಅನುಕೂಲಗಳು ಹಾಗೂ ಅನಾನುಕೂಲಗಳು ಚರ್ಚಿಸಿ ಆ ಆಯ್ಕೆಗಳನ್ನೆಲ್ಲಾ ಜನರ ಮುಂದೆ ಇಟ್ಟು, ಬಹುಜನರು ಪೋಲಿಂಗ್ ಮೂಲಕ ಒಪ್ಪಿಕೊಂಡ (ಪ್ರಜಾಪ್ರಭುತ್ವ) ಪರಿಹಾರವನ್ನು ಅನುಷ್ಠಾನ ಮಾಡುವ ವೇದಿಕೆ. ರಾಜಕೀಯದಲ್ಲಿ ಜನರನ್ನು ಪಾಲ್ಗೊಳ್ಳಿಸಿ ಪ್ರಜಾಪ್ರಭುತ್ವ ರೀತಿಯಲ್ಲಿ ಪರಿಹಾರ ಹುಡುಕುವ ವೇದಿಕೆ ಯಾವ ಪಕ್ಷದಲ್ಲೂ ಇಲ್ಲಾ. ರಾಜಕೀಯದಲ್ಲಿ ಗರಿಷ್ಠ ನಿರ್ಧಾರಗಳು ಜನರನ್ನು ಕೇಳದೆ ನಾಯಕನಿಗೆ ಲಾಭವಿರುವ ಯೋಜನೆಗಳನ್ನು/ಪರಿಹಾರಗಳನ್ನು ಅನುಷ್ಠಾನ ಗಳಿಸಲಾಗುತ್ತದೆ. ಆದರೆ ಪ್ರಜಾಕೀಯದಲ್ಲಿ ಯೋಜನೆಗಳು/ಸಮಸ್ಯೆಗಳ ಚರ್ಚೆಗೆ ಜನರನ್ನು ಪಾಲ್ಗೊಳ್ಳಿಸಲಾಗುತ್ತದೆ. ಇದೇ ರಾಜಕೀಯಕ್ಕೂ ಪ್ರಜಾಕೀಯಕ್ಕೂ ಇರುವ ತುಂಬಾ ಮುಖ್ಯವಾದ ವ್ಯತ್ಯಾಸ. ಇಲ್ಲಿ ಪ್ರಜಾಕೀಯ ಅನುಯಾಯಿಗಳು ಎನು ಮಾಡುತ್ತಿರಾ, ನೀವು ಹೇಗೆ ಪರಿಹಾರ ಹೇಳುತ್ತೀರಾ ಅಂತ ಕೇಳೊದಕ್ಕಿಂತ ಪ್ರಜಾಕೀಯ ಒಂದು ಪರಿಹಾಗಳನ್ನು ಹುಡುಕುವ ವೇದಿಕೆ ಅಂದುಕೊಳ್ಳಬೇಕು. ಪ್ರಜಾಕೀಯ ಅನುಯಾಯಿಗಳು ಜನ ಕೇಳೋದಕ್ಕೆಲ್ಲಾ ಉತ್ತರ ಕೊಡಲು ಬಂದಿಲ್ಲಾ/ಇಲ್ಲಾ. ಕೇಳಿದ್ದಕ್ಕೆಲ್ಲಾ ಉತ್ತರ ಕೊಡೋಕೆ, ಮನವರಿಕೆ ಮಾಡೋಕೆ ಪ್ರಜಾಕೀಯ ಅನುಯಾಯಿಗಳು ತಜ್ಞರು ಅಲ್ಲಾ. ಹಾಗಾಗಿ, ಇದು ಪರಿಹಾಗಳ ಚರ್ಚೆಯ ವೇದಿಕೆ ವಿನಃ ಎಲ್ಲಾ ಸಮಸ್ಯೆಗಳಿಗೆ ಕೂಡಲೆ ಪರಿಹಾರ ಸಿಗುತ್ತೆ ಅಂತ ಅರ್ಥ ಅಲ್ಲಾ. ಇದು ಸಮಸ್ಯೆ ಇರುವವರು ಹಾಗೂ ಪರಿಹಾರ ಗೊತ್ತಿರುವವರನ್ನು ಒಟ್ಟುಗೂಡಿಸೋ ಒಂದು ವೇದಿಕೆ. ಪ್ರಜಾಕೀಯ ಸಿದ್ಧಾಂತದಿಂದ ಅಲ್ಪಾವಧಿಯಲ್ಲಿ ಪರಿಹಾರಕ್ಕಿಂತ, ದೀರ್ಘಕಾಲದಲ್ಲಿ ಫಲಿತಾಂಶ ಕೊಡುವ, ಶಾಶ್ವತ ಪರಿಹಾರದ ಕಡೆಗೆ ಪ್ರಯತ್ನಿಸುವ ಒಂದು ವೇದಿಕೆ.

46. ಪ್ರಜಾಕೀಯ ಸಿದ್ಧಾಂತವನ್ನು ತಿಳಿದು ನಿಮಗೆ ಅದು ಸತ್ಯ ಎನಿಸಿದರೆ, ನಿಮ್ಮ(ಪ್ರಜೆಯ) ಮುಂದಿನ ನಡೆ ಏನಿರಬೇಕು?

ಒಂದು ಸಲ ನಿಮಗೆ ಪ್ರಜಾಕೀಯ ಸಿದ್ಧಾಂತ ಸತ್ಯ ಅಂತ ಅನಿಸಿದರೆ, ಇದರ ಮೇಲೆ ನಂಬಿಕೆ ಇದ್ದಲ್ಲಿ, ಪ್ರಜಾಕೀಯ ನನಗೆ ಆದಷ್ಟು ಬೇಗ ಬೇಕೇ ಬೇಕು ಎಂದು ಇದ್ದಲ್ಲಿ, ಪ್ರಜಾಕೀಯ ಸಿದ್ಧಾಂತವನ್ನು ಒಂದು 100 ಜನರಿಗೆ ನಿಮ್ಮ ಬಿಡುವಿನ ಸಮಯದಲ್ಲಿ ಹೇಳಿ. ಮೊದಲು ನಿಮ್ಮ 10 ಸ್ನೇಹಿತರು, 10 ಸಂಬಂಧಿಕರು, ನಿಮ್ಮ ಮನೆಯ ಸುತ್ತಮುತ್ತಲಿನ 10 ಜನ, ನೀವು ಮಾಡುವ ಕೆಲಸದ ಸ್ಥಳದಲ್ಲಿ ಇರುವ 10 ಜನ, ನೀವು ಪ್ರತಿದಿನ ಅಥವಾ ಕೆಲವು ಸಂದರ್ಭಗಳಲ್ಲಿ ಎಲ್ಲಾದರೂ ಹೊರಗೆ ಹೋದರೆ ಭೇಟಿಮಾಡುವ 10 ಜನ, ಕೆಲವು ಸಂದರ್ಭಗಳಲ್ಲಿ ಆಕಸ್ಮಿಕವಾಗಿ ನೀವು ಭೇಟಿಯಾಗುವ 10 ಜನ. ಇಂತಹ ಜನರಿಗೆಲ್ಲಾ ಪ್ರಜಾಕೀಯ ವಿಚಾರಗಳನ್ನು ಹೇಳಿ. ಈ ರೀತಿ ನಿಮ್ಮಲ್ಲೇ ಕನಿಷ್ಠ 60 ಜನ ಮೇಲೆ ಹೇಳಿರುವ ದಾರಿಗಳಲ್ಲೇ ಸಿಗುತ್ತಾರೆ. ಈ 60 ಜನರಲ್ಲಿ 10 ಜನ ಬದಲಾದರೂ ಈ ವಿಚಾರ ಇನ್ನೂ ಹಲವು ಜನರಿಗೆ ತಲುಪುತ್ತದೆ. ಉದಾಹರಣೆ : 10 ಜನ 10 ಜನರಿಗೆ ಹೇಳಿದರೆ 100 ಜನರಿಗೆ ತಲುಪುತ್ತದೆ. 100 ಜನ 10 ಜನಕ್ಕೆ ಹೇಳಿದರೆ 1000 ಜನಕ್ಕೆ ತಲುಪುತ್ತದೆ. 1000 ಜನ 10 ಜನರಿಗೆ ಹೇಳಿದರೆ 10000 ಜನಕ್ಕೆ ತಲುಪುತ್ತದೆ. ಈ ರೀತಿ ಪ್ರಜಾಕೀಯ ವಿಚಾರವು ಒಂದು ಜನರ ಸರಪಳಿಯಂತೆ ಜನರಿಂದ ಜನರಿಗೆ ತಲುಪುತ್ತಿದೆ. ಹಾಗಾಗಿ ಒಂದು ಸಲ ಪ್ರಜಾಕೀಯ ವಿಚಾರ ನಿಮಗೆ ತಿಳಿದರೆ, ನಿಮ್ಮ ಮುಂದಿನ ನಡೆಯು, ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು, ನಿಮ್ಮ ಬಿಡುವಿನ ಸಮಯದಲ್ಲಿ ಪ್ರಜಾಕೀಯ ವಿಚಾರಗಳನ್ನು ಹೆಚ್ಚು ಹೆಚ್ಚು ಜನರಿಗೆ ಸಾಧ್ಯವಾದಷ್ಟು ತಿಳಿಸಿ. ಅಷ್ಟೇ ನಿಮ್ಮ ಜವಾಬ್ದಾರಿ.

49. ನಮ್ಮೆಲ್ಲರ ಪಕ್ಷವಾದ ಉತ್ತಮ ಪ್ರಜಾಕೀಯ ಪಕ್ಷ ಅಧಿಕಾರಕ್ಕೆ ಬರೋದಕ್ಕೆ ಎಷ್ಟು ವರ್ಷ ಬೇಕಾಗಬಹುದು?

ಉತ್ತಮ ಪ್ರಜಾಕೀಯ ಪಕ್ಷದ ಮೂಲ ಉದ್ದೇಶವು ಪ್ರಜಾಕೀಯ ಸಿದ್ಧಾಂತವು ಜನರ ಮನಸ್ಸಲ್ಲಿ ಆಳವಾಗಿ ಬೇರೂರಿ, ಜನರಲ್ಲಿ ಜವಾಬ್ದಾರಿ ಬಂದು, ಜನರ ಬಳಿ ಅಧಿಕಾರ ಇರಬೇಕು, ಜನರು ಒಗ್ಗಟ್ಟಾಗಿರಲಿ ಎಂಬುದಾಗಿರುತ್ತದೆ. ಇಲ್ಲಿ ಪಕ್ಷ ಇಷ್ಟೇ ವರ್ಷಗಳಲ್ಲಿ ಗೆಲ್ಲಬೇಕು, ಯಾರೋ ಒಬ್ಬ ಬಂದು ಅಧಿಕಾರ ಹಿಡಿಯಬೇಕು, ವ್ಯವಸ್ಥೆ ಬದಲಾಯಿಸಬೇಕು ಎಂಬುದಲ್ಲ. ಇಷ್ಟೇ ವರ್ಷದಲ್ಲಿ ಗೆಲ್ಲಬೇಕು ಎಂದು ಗುರಿಯಿದ್ದರೆ, ಅಲ್ಲಿ ಪುನಃ ಗೆಲ್ಲಬೇಕು ಅನ್ನೋ ಒತ್ತಡದಲ್ಲಿ ತಪ್ಪಾದ ಮಾರ್ಗಗಳನ್ನು ಅನುಸರಿಸಿ ಪುನಃ ಭ್ರಷ್ಟಾಚಾರಕ್ಕೆ ಈಡಾಗಬಹುದು. ಹಾಗಾಗಿ ಬಹು ಜನರಿಗೆಲ್ಲಾ, ಪ್ರಜಾಕೀಯ ಸಿದ್ಧಾಂತವು ಅರ್ಥವಾಗಿ, ಜನರೇ ಜವಾಬ್ದಾರಿ ತಗೊಂಡು, ಉತ್ತಮ ಪ್ರಜಾಕೀಯ ಪಕ್ಷವು ಅಧಿಕಾರಕ್ಕೆ ಬರುವುದಕ್ಕೆ ಇಂತಿಷ್ಟೇ ವರ್ಷ ಅಂತಿಲ್ಲ. ಅದು 1, 5, 10, 100 ಎಷ್ಟು ವರ್ಷಗಳಾದರೂ ಆಗಬಹುದು. ಆದರೆ ಅದು ಸರಿಯಾದ ಮಾರ್ಗದಲ್ಲಿ ಬೇಗ ಆಗಲಿ. ಮುಂದೆ ಏನಾಗುತ್ತದೆ, ಜನರಿಗೆ ತಲುಪುತ್ತೋ, ತುಂಬಾ ನಿಧಾನ ಅನ್ನುವುದೆಲ್ಲ ಬಿಟ್ಟು, ಸತ್ಯದ ಅರಿವಾದರೆ, ಪ್ರಜಾಕೀಯ ಸತ್ಯ ಎಂದೆನಿಸಿದರೆ, ಆ ವ್ಯಕ್ತಿಗೆ ಈ ಕ್ಷಣ , ಈ ದಿನವೇ ಮುಖ್ಯ. ಈಗಿನಿಂದಲೇ ಈ ವಿಚಾರಗಳನ್ನು ಹೆಚ್ಚು ಜನರಿಗೆ ತಲುಪಿಸುವ ಕಾರ್ಯ ಮಾಡಿ. ಸತ್ಯದ ಕಡೆಗೆ ನಿಮ್ಮ ನಿರಂತರ ಪ್ರಯತವಿದ್ದಲ್ಲಿ ಉತ್ತಮ ಪ್ರಜಾಕೀಯ ಪಕ್ಷ ಆದಷ್ಟು ಬೇಗ ಅಧಿಕಾರಕ್ಕೆ ಬರುತ್ತದೆ.

56. ಪ್ರಜಾಕೀಯ ವಿಚಾರಗಳನ್ನು ಜನರಿಗೆ ತಲುಪಿಸುತ್ತಿರುವ ಒಬ್ಬ ವ್ಯಕ್ತಿಯನ್ನು ಏನೆಂದು ಕರೆಯಬಹುದು?

ಪ್ರಜಾಕೀಯದ ಸಿದ್ಧಾಂತ ಹಾಗೂ ಮಾಹಿತಿಗಳನ್ನು ಜನರಿಗೆ ತಲುಪಿಸುತ್ತಿರುವ ವ್ಯಕ್ತಿಯನ್ನು ಪ್ರಜಾಕೀಯದ ಅನುಯಾಯಿ ಎನ್ನಬಹುದು. ಎಲ್ಲರೂ ಪ್ರಜಾಕೀಯದ ಅನುಯಾಯಿಗಳಾಗಿ, ಪ್ರಜಾಕೀಯವನ್ನು ಅನುಸರಿಸುವುದು ಅವಶ್ಯ. ಬೆಂಬಲಿಗರು ಎಂದರೆ, ಕೆಲವೊಂದು ರೀತಿಯಲ್ಲಿ ಬೆಂಬಲಿಸಬಹುದು. ಆದರೆ ಅನುಯಾಯಿಗಳು ಎಂದರೆ, ಇದರ ತತ್ವ - ಸಿಧ್ಧಾಂತವನ್ನು ಅನುಸರಿಸುವವರು. ಬೆಂಬಲಿಸುವವರ ಬೆಂಬಲ, ಬೇರೆ ಕಡೆ ವಾಲಬಹುದು. ಆದರೆ, ಅನುಸರಿಸುವವರು ಎಂದೂ ಬೇರೆ ಕಡೆ ಹೋಗಲು ಸಾಧ್ಯವಿಲ್ಲ. ಏಕೆಂದರೆ, ಅವರು, ಅವರ ಜೀವನದಲ್ಲಿ ಆ ಸಿದ್ಧಾಂತದ ವಿಚಾರಗಳನ್ನು ಅಳವಡಿಸಿಕೊಂಡಿರುತ್ತಾರೆ.

57. ಪ್ರಜಾಕೀಯದ ವಿಚಾರಗಳನ್ನು ಜನರಿಗೆ ತಿಳಿಸುವುದನ್ನು ಪ್ರಚಾರ ಎಂದು ಯಾಕೆ ಕರೆಯಬಾರದು?

*ಪ್ರಚಾರ-Publicity, ಮಾಹಿತಿ- Information*

ಪ್ರಚಾರ ಎಂದರೆ, ಮಿಥ್ಯಾ ಹಾಗು ಸುಳ್ಳು ಪ್ರಪಂಚವನ್ನು ರೂಪಿಸಿ, ಜನರ ಮನಸ್ಸನ್ನು ತಮಗೆ ಬೇಕಾದ ಹಾಗೆ ಓಲೈಸುವುದು. ಯಾವುದೇ ಒಂದು ವಸ್ತುವನ್ನು ಜನರು ಖರೀದಿಸುವಂತೆ ಮಾಡಲು, ಆ ವಸ್ತುವನ್ನು ವೈಭವಿಕರಣ ಮಾಡುವುದು, ಅಥವಾ ಯಾವುದೇ ಒಂದು ತತ್ವ, ನೀತಿ, ನಿಯಮ, ವ್ಯಕ್ತಿ, ಪಕ್ಷ, ಇತ್ಯಾದಿಗಳನ್ನು ವೈಭವಿಕರಣ ಮಾಡಿ, ಜನರ ಮನಸ್ಸಿನಲ್ಲಿ, ಒಂದು ಮಿಥ್ಯಾ ಪ್ರಪಂಚವನ್ನೆ ನಿರ್ಮಾಣ ಮಾಡುವುದು, ಜನರನ್ನು, ಸೂಕ್ಷ್ಮವಾದ ವಿಷಯದಿಂದ (ಧರ್ಮ, ಜಾತಿ, ಪಂಗಡ, ಸಂಸ್ಕ್ರತಿ, ಭಾಷೆ, ಇತ್ಯಾದಿ) ಕೆರಳಿಸಿ, ಜನರ ಅಭಿಪ್ರಾಯವನ್ನು ಕೇಂದ್ರೀಕರಿಸುವುದು. ಕೆಲವು ಪ್ರಜಾಕೀಯ ಅನುಯಾಯಿಗಳ ಅಭಿಪ್ರಾಯದಂತೆ, ಪ್ರಜಾಕೀಯದಲ್ಲಿ ಪ್ರಚಾರ ಎಂಬ ಶಬ್ದವನ್ನು ಉಪಯೋಗಿಸುವುದು ಸರಿ ಅಲ್ಲ. ಪ್ರಜಾಕೀಯದಲ್ಲಿ, ನಾವು ಪ್ರಜೆಗಳಿಗೆ, ಪ್ರಜಾಕೀಯದ ಮಾಹಿತಿ(Information) ಕೊಡುತ್ತಿದ್ದೇವೆ. ಇಲ್ಲಿ ಓಲೈಕೆ ಅಥವಾ ಮಿಥ್ಯಾ ಪ್ರಪಂಚವನ್ನು ತೋರಿಸುವುದಿಲ್ಲ. ಇದು ಸತ್ಯ ಹಾಗು ಒಂದು ಮೌನ ಕ್ರಾಂತಿ. ಆದ್ದರಿಂದ, ಪ್ರಜೆಗಳಿಗೆ, ಪ್ರಜಾಕೀಯದ ಮಾಹಿತಿ ತಲುಪಿಸುವೆವು. ಮಾಧ್ಯಮಗಳು, ದೇಶದಲ್ಲಿರುವ ಪ್ರಜೆಗಳಿಗೆ, ದೇಶದಲ್ಲಿ ನಡೆಯುತ್ತಿರುವ ಹಾಗು- ಹೋಗುಗಳ ಮಾಹಿತಿ ತಲುಪಿಸುವುದು ಹಾಗು ತಲುಪಿಸುವ ಮಾಧ್ಯಮಗಳು, ಟೆಲಿವಿಷನ್, ರೇಡಿಯೋ, ಮುದ್ರಣ, ಸಾಮಾಜಿಕ ಜಾಲತಾಣ, ಅಂತರ್ ಜಾಲ, ಇತ್ಯಾದಿಗಳನ್ಞು ಉಪಯೋಗಿಸುವುದು. ಆದರೆ, ನಮ್ಮ ದೇಶದ ದುರಾಧೃಷ್ಟ, ಮಾಧ್ಯಮಗಳು, ಮಾಹಿತಿ ಒದಗಿಸುವ ಕೇಂದ್ರಗಳಾಗಿ ಇರದೆ, ಯಾವುದೊ ಒಂದು ಪಕ್ಷದ ಪ್ರಚಾರ ಮಾಧ್ಯಮ( Advertisement Company) ಗಳಾಗಿವೆ. ನಾವು ಪ್ರಜಾಕೀಯದ ಪ್ರತಿಯೊಬ್ಬ ಅನುಯಾಯಿಯು, ಪ್ರಜೆಗಳಿಗೆ, ಪ್ರಜಾಕೀಯದ ಮಾಹಿತಿ ಒದಗಿಸುವ ನಿಜವಾದ ಮಾಧ್ಯಮಗಳಾಗೋಣ. ಸತ್ಯಕ್ಕೆ ಪ್ರಚಾರ ಬೇಡ. ಸತ್ಯದ ಮಾಹಿತಿ ತಲುಪಿಸೋಣ.ಆದ್ದರಿಂದ ಪ್ರಜಾಕೀಯದಲ್ಲಿ ಪ್ರಚಾರ ಎಂಬ ಶಬ್ದವನ್ನು ಉಪಯೋಗಿಸುವುದನ್ನು ನಿಲ್ಲಿಸಿದರೆ ಉತ್ತಮ. ನಾವು ಕೇವಲ ಪ್ರಜಾಕೀಯದ ಮಾಹಿತಿ ಕೊಡುತ್ತಾ ಹೋಗೋಣ.

*ಪ್ರಚಾರ ಬೇಡ*, *ಮಾಹಿತಿ ತಲುಪಿಸೋಣ*.

^

Already a member? Login.

Place this code where you want the questions and answer appear on your website.

<div class="faq-container"></div><script channelShortName="prajaakeeya" id="faq-question-list-script" src="https://static.faqabout.me/widgets/question-list-widget.min.js"></script>
Click to copy